ಜಕ್ಕಣಾರ್ಯ: -
ಸು. ೧೪೩೦. ಕನ್ನಡದಲ್ಲಿ ಏಕೋತ್ತರ ಶತಸ್ಥಲವನ್ನು ಬರೆದ ವೀರಶೈವಕವಿ. ಈತನಿಗೆ ಜಕ್ಕಣ್ಣ, ಜಕ್ಕಪ್ಪ ಎಂಬ ಹೆಸರೂ ಭಕ್ತಿಭಂಡಾರಿ ಎಂಬ ಬಿರುದೂ ಇದ್ದಂತೆ ತಿಳಿಯುತ್ತದೆ. ಈತ ವಿಜಯನಗರದ ಪ್ರೌಢದೇವರಾಯನ (೧೪೧೯-೧೪೪೬) ಮಂತ್ರಿ, ದಂಡನಾಯಕ, ಭಂಡಾರಿ ಆಗಿದ್ದ. ಈತನ ಗುರು ಮಹಾಲಿಂಗದೇವನ ಶಿಷ್ಯನಾದ ಕುಮಾರ ಬಂಕನಾಥ. ಮಹಾಲಿಂಗದೇವ ಈತನ ಉಪದೇಶಾರ್ಥವಾಗಿ ಪ್ರಭುದೇವರಷಟ್ಸ್ಥಲ ಜ್ಞಾನಚಾರಿತ್ರ ವಚನದ ಟೀಕೆ ಮತ್ತು ಏಕೋತ್ತರ ಶತಸ್ಥಲ ಎಂಬ ಎರಡು ಗ್ರಂಥಗಳನ್ನು ಬರೆದುದಾಗಿ ಮಹಲಿಂಗದೇವನ ಗ್ರಂಥಗಳಿಂದ ತಿಳಿದುಬರುತ್ತದೆ.

	ಗುಬ್ಬಿಮಲ್ಲಣಾಚಾರ್ಯ (ಸು ೧೫೩೦) ವೀರಶೈವ ಮಹಾವೃತ ಪುರಾಣದಲ್ಲಿ ಭಂಡಾರಿ ಜಕ್ಕಪ್ಪ ಇತರ ಕೆಲವರಂತೆ ತಾನೂ ಲಕ್ಷ ಸಂಖ್ಯೆಯಲ್ಲಿ ಹಣ ಖರ್ಚು ಮಾಡಿ ವೀರಶೈವ ಸಾಹಿತ್ಯವನ್ನು ಪ್ರೋತ್ಸಾಹಿಸಿದನೆಂದು ತಿಳಿಸಿದ್ದಾನೆ. ಅದೃಶ್ಯ ಕವಿಯ (ಸು. ೧೫೮೦) ಪ್ರೌಢರಾಯನ ಕಾವ್ಯ. ಸಿದ್ಧನಂಜೇಶನ (ಸು. ೧೬೦೦) ರಾಘವಾಂಕ ಚಾರಿತ್ರಂ ಮತ್ತು ಶಾಂತಲಿಂಗದೇಶಿಕನ (ಸು. ೧೬೭೨) ಭೈರವೇಶ್ವರ ಕಾವ್ಯಕಥಾಮಣಿ ಸೂತ್ರ ರತ್ನಾಕರಗಳಲ್ಲಿ ಜಕ್ಕಣಾರ್ಯನ ಪ್ರಸಕ್ತಿಯಿದೆ.

	ಜಕ್ಕಣಾರ್ಯನಿಗೆ ಸಂಬಂಧಿಸಿದ ಒಂದು ಐತಿಹ್ಯವನ್ನು ಅದೃಶ್ಯಕವಿಯ ಪ್ರೌಢರಾಯನ ಕಾವ್ಯ ಮತ್ತು ಅದನ್ನೆ ಅನುಸರಿಸಿದ ಶಾಂತಲಿಂಗದೇಶಿಕನ ಭೈರವೇಶ್ವರ ಕಾವ್ಯಕಥಾಮಣಿ ಸೂತ್ರ ರತ್ನಾಕರದಲ್ಲಿ ಕಾಣಬಹುದು.

	ಕುಂತಲದೇಶದ ಪ್ರೌಢದೇವರಾಯನ ಆಳ್ವಿಕೆಯಲ್ಲಿ ಜಕ್ಕಣಾರ್ಯ ಮಂತ್ರಿ. ಮುಕುಂದಪೆದ್ದಿ ಮತ್ತು ವೃಂದಚಾರ್ಯರು ಗುರುಗಳು. ಈ ಗುರುಗಳು ಪ್ರೌಢದೇವರಾಯನಿಗೆ ಒಂಬತ್ತು ತಿಂಗಳು ಭಾರತವನ್ನು ಓದಿ ಹೇಳಿ ಅದರ ಮೆರವಣಿಗೆ ಮಾಡಿದರು. ಇದನ್ನು ಕಂಡ ಜಕ್ಕಣಾರ್ಯ 'ಪ್ರಭೂಸ್ವಾಮಿ ಪೇಳ್ದ ವಚನಂಗಳಿಗೆ ಕ್ರಮದಿಯೇಕೋತ್ರಶತಸ್ಥಲ ಸೂತ್ರಗಳನ್ನಿಟ್ಟು ರಮಣೀಯವಾಗಿ ವರ್ಣಕವಸ್ತುಗಳಿಂದ ವ್ಯಾಖ್ಯಾನ ಮಾಡಿದ. ನೂರೊಂದು ವಿರಕ್ತರು, ಕರಸ್ಥಲದ ನಾಗಿದೇವ, ಕಲ್ಲುಮಠದ ಪ್ರಭುದೇವ (ಈತನ ಕಾಲವಿಚಾರದಲ್ಲಿ ಅಭಿಪ್ರಾಯ ಭೇದವಿದೆ.) ವೀರಣ್ಣೊಡೆಯ, ಚಾಮರಸ ಮೊದಲಾದ ಶರಣರು ಆ ಕೃತಿಯನ್ನು ಮೆರವಣಿಗೆ ಮಾಡಿದರು.

	ಮರುದಿನ ಬೆಳಗಿನ ಆಸ್ಥಾನದಲ್ಲಿ ಮುಕುಂದಪೆದ್ದಿ ಜಕ್ಕಣಾರ್ಯನನ್ನು ಕುರಿತು ರಾತ್ರಿ ನಡೆದುದು ಸತ್ತವರ ಒಸಗೆಯೋ, ಹೆತ್ತ ಸೌರಂಭವೋ ಎಂದು ಪ್ರಶ್ನಿಸಿದ. ಆಗ ಜಕ್ಕಣ್ಣ ಉತ್ಸವದ ವೇಳೆಯೊಳು ಮುಕ್ತಿಯೆಂದೆಂಬ ಶಿಶುವಂ ಭಕ್ತಿ ಸತಿಪೆತ್ತಳು-ಎಂದ.

	ಮುಕುಂದಪೆದ್ದಿ ಅಲ್ಲಮನ ಒಂದು ವಚನಕ್ಕೆ ಅಸಂಬದ್ಧ ವ್ಯಾಖ್ಯಾನ ಮಾಡಿದ. ಅದನ್ನು ಪ್ರತಿಭಟಿಸಿ ಹದಿನೆಂಟು ಮತದವರು ಮೆಚ್ಚುವಂತೆ ಜಕ್ಕಣ್ಣ ವ್ಯಾಖ್ಯಾನ ಮಾಡಿದ. ಪ್ರೌಢದೇವರಾಯ ಮೆಚ್ಚಿ ಜಕ್ಕಣ್ಣನಿಗೆ ತ್ರಿಸರದಪದಕ ಮತ್ತು ರುದ್ರಕಂಕಣವನ್ನು ಕೊಡಲು ಹೋದಾಗ ಮುಕುಂದಪೆದ್ದಿ ಶರಣರು ಮಾಯೆಯ ಮೋಹಕ್ಕೆ ಬೆರಸಿರುವರೊ ಇಲ್ಲವೊ ಎನ್ನುವುದನ್ನು ಪರೀಕ್ಷೆ ಮಾಡಿದ ಅನಂತರ ಮನ್ನಿಸುವುದು ಎಂದ. ಈ ಪ್ರಶ್ನೆಗೆ ಹದಿನೈದು ದಿವಸದಲ್ಲಿ ಉತ್ತರ ಕೊಡುವುದಾಗಿ ಚಾಮರಸ ಹೇಳಿದ. ಮುಕುಂದಪೆದ್ದಿ ಮನೆಗೆ ಹೋದ.

	ದಿವಸ ಒಂದಕ್ಕೆ ನೂರಹನ್ನೊಂದು ಪದ್ಯಗಳಂತೆ ಹನ್ನೊಂದು ದಿನದಲ್ಲಿ ಚಾಮರಸ ಪ್ರಭುಲಿಂಗಲೀಲೆಯನ್ನು ಮುಗಿಸಿ ಪ್ರೌಢರಾಯನಿಗೆ ಒಪ್ಪಿಸಿದ. ದೊರೆ ಆಸ್ಥಾನ ಕವಿಗಳಿಗೆ ಪ್ರಭುಲಿಂಗಲೀಲೆಯ ಅರ್ಥ ಹೇಳಲು ಕೇಳಿದ. ಯಾರೂ ಮುಂದೆ ಬರಲಿಲ್ಲ. ಜಕ್ಕಣಾರ್ಯ 'ಪ್ರಭುಲಿಂಗಲೀಲಾಮೃತದಭಿಪ್ರಾಯವೊಂದುಳಿಯದೆ ಹೇಳಿದ. ಅರಸ ಮೆಚ್ಚಿ ವಾದಿಗಳನ್ನು ಹೊರಹಾಕಿ ಜಕ್ಕಣಾರ್ಯನಿಗೆ ರನ್ನದೊಡಿಗೆ, ತ್ರಿಸರ, ರುದ್ರಕಂಕಣ, ದಿವ್ಯವಸನ, ವಾಹನ ಮತ್ತು ಐದು ಗ್ರಾಮಗಳನ್ನು ಉಂಬಳಿ ಕೊಟ್ಟ. ಜಕ್ಕಣಾರ್ಯ ತನ್ನಂತೆಯೇ ಚಾಮರಸನಿಗೂ ಸತ್ಕಾರ ಮಾಡಿಸಿದ. ಪ್ರಭುಲಿಂಗಲೀಲೆಯನ್ನು ಆನೆಯ ಮೇಲೆ ಮೆರವಣಿಗೆ ಮಾಡಿ ಜಕ್ಕಣಚಾರ್ಯರಿಗೆ ಮಂತ್ರಿಪದವಿಯನ್ನು ಕೊಟ್ಟು ಬಯಲಾದ.

	ಜಕ್ಕಾಣಾರ್ಯನ ಏಕೋತ್ತರ ಶತಸ್ಥಲಕ್ಕೆ ಕನ್ನಡದಲ್ಲಿ ಒಂದು ವಿಶಿಷ್ಟ ಸ್ಥಾನವಿದೆ. ಗೀತ ಸಾಹಿತ್ಯ ಕನ್ನಡ ಭಾಷೆಯಲ್ಲಿ ಹರಿದಾಸರಿಂದ ಈಚೆಗೆ ಬಂದದ್ದು ಎನ್ನುವ ಅಭಿಪ್ರಾಯವಿತ್ತು. ಆದರೆ ೧೨ನೆಯ ಶತಮಾನದಲ್ಲಿಯೇ ಶಿವಶರಣರಿಂದ ಗೀತ ಸಾಹಿತ್ಯದ ನಿರ್ಮಾಣವಾಗಿದೆ ಎನ್ನುವ ಅಮೂಲ್ಯ ಅಂಶವನ್ನು ಈ ಏಕೋತ್ತರ ಶತಸ್ಥಲ ಸೂಚಿಸುತ್ತದೆ.

	ಮಹಾಲಿಂಗದೇವನ ಏಕೋತ್ತರ ಶತಸ್ಥಲ ಜಕ್ಕಣಾರ್ಯನ ಏಕೋತ್ತರ ಶತಸ್ಥಲಕ್ಕೆ ಮೂಲ. ಜಕ್ಕಣನ ಏಕೋತ್ತರ ಶತಸ್ಥಲದಲ್ಲಿ ಶಿವಶರಣರ ಕೆಲವು ವಚನಗಳು ಇಲ್ಲ. ಉಳಿದಂತೆ ಮಹಾಲಿಂಗದೇವನ ಮತ್ತು ಜಕ್ಕಣಾರ್ಯನ ಕೃತಿಗಳು ಸ್ವರೂಪದಲ್ಲಿ ಒಂದೆ. ಜಕ್ಕಣನ ಏಕೋತ್ತರ ಶತಸ್ಥಲದ ಆರಂಭದಲ್ಲಿ ಹೀಗಿದೆ.

	" ಏಕೋತ್ತರ ಶತಸ್ಥಲ : ಜ್ಞಾನಶೂನ್ಯಸ್ಥಲ ಒಂದೆ ಉತ್ತರವಾಗಿ, ನೂರು ಸ್ಥಲವೆ ಕಡೆಯಾಗಿ, ನೂರೊಂದು ಸ್ಥಲವು. ಶಿವನಂ ನಿರೂಪಿಸಲು ತಕ್ಕ ಕಾಮಿಕನೆಂಬ ಮಹಾಗಮದಲ್ಲಿಯ ಮೇಲುಭಾಗೆಯಲ್ಲಿ ಶ್ರೆಷ್ಠವಾದ ವೀರಶೈವ ಮತವು ಹೇಳಲ್ಪಟ್ಟಿತು. ಅದನ್ನೆ ರೇವಣಸಿದ್ಧೇಶ್ವರನು ಅಗಸ್ತ್ಯಗೆ ಬೋಧಿಸಿದರು. ಅದೇ ವೀರಶೈವರುಗಳಿಗೆ ಸ್ಥಲಭೇದದಿಂದ ಆ ಶಾಸ್ತ್ರವು ಆರು ಪ್ರಕಾರವನ್ನುಳ್ಳದಹುದು. ಮೊದಲಲ್ಲಿ ಭಕ್ತಸ್ಥಲ ೧೫, ಮಹೇಶ್ವರ ಸ್ಥಲ ೯, ಪ್ರಸಾದಿಸ್ಥಲ ೭, ಪ್ರಾಣಲಿಂಗಿಸ್ಥಲ ೫, ಶರಣಸ್ಥಲ ೪, ಐಕ್ಯಸ್ಥಲ ೪, ಅನಂತರಂ ಅಂಗಸ್ಥಲಂಗಳನಾಶ್ರೆಂಸಿದ್ದಲ್ಲಿ ಲಿಂಗಸ್ಥಲಂಗಳೊಳಗೆ ಆಚಾರಲಿಂಗಸ್ಥಲ ೯, ಗುರುಲಿಂಗಸ್ಥಲ ೯, ಶಿವಲಿಂಗಸ್ಥಲ ೪೪, ಲಿಂಗಸ್ಥಲ ೫೭, ಉಭಯ ಪಿಂಡಾ ದಿ ಜ್ಞಾನ ಶೂನ್ಯಾಂತಮಾದ ನೂರೊಂದು ಸ್ಥಲಂಗಳು. ಅವನೆ ನಿರೂಪಿಸಿದ ಪುರಾತನದ ಮಹಾವಚನಂಗಳೊಳಗೆ ಜಕ್ಕಣರ‍್ಯರು ಅವರೊಳಗೆ ಸಾರವಾದ ನೂರೊಂದು ಸ್ಥಲ ವಚನಂಗಳ ತೆಗೆದುಕೊಂಡು ಸೂತ್ರವಿಟ್ಟು ಸಂಗ್ರಹಿಸಿದರು..."

	ಈ ಗ್ರಂಥಕ್ಕೆ ಶ್ರಿಗಿರೀಂದ್ರ ಎಂಬುವನ ವ್ಯಾಖ್ಯಾನವಿದೆ.	(ಜಿ.ಜಿ.ಎಂ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ